ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ರಾಜ್, ಸದ್ಯದಲ್ಲೇ ಬಾಲಿವುಡ್ ಗೆ ಹಾರಲಿದ್ದಾರೆ. ರಾಧಿಕಾ ಪಂಡಿತ್ ಮತ್ತು ತರುಣ್ ಕಾಂಬಿನೇಷನ್ ನಲ್ಲಿ ಬಂದಿದ್ದ “ಲವ್ ಗುರು” ಸಿನಿಮಾವನ್ನು ಪ್ರಶಾಂತ್ ರಾಜ್ ಇದೀಗ ಹಿಂದಿಗೆ ಮಾಡಲಿದ್ದಾರೆ. ಬಾಲಿವುಡ್ ನ ಹೆಸರಾಂತ ನಟರೊಬ್ಬರು ನಾಯಕನಾಗಿ ನಟಿಸುತ್ತಿದ್ದಾರೆ.
ಮಾ.10 ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ತಮ್ಮ ಹಿಂದಿ ಸಿನಿಮಾದ ಬಗ್ಗೆ ಅವರು ಮಾತನಾಡಿದ್ದಾರೆ.


“ಕ್ಯೂಟ್ ಲವ್ ಸ್ಟೋರಿ ಹೊಂದಿರುವ ಲವ್ ಗುರು ಸಿನಿಮಾದ ಸಿಕ್ವೆಲ್ ಮಾಡಬೇಕು ಅಂತ ಹಲವು ಬಾರಿ ಅಂದುಕೊಂಡಿದ್ದೆ. ಈ ಕುರಿತು ಕೆಲಸ ಕೂಡ ನಡೆದಿತ್ತು. ಈ ಸಂದರ್ಭದಲ್ಲಿ ಬಾಲಿವುಡ್ ನಿಂದ ಅವಕಾಶವೊಂದು ಕೂಡಿ ಬಂತು. ಹಾಗಾಗಿ ಲವ್ ಗುರು ಈಗ ಹಿಂದಿಗೆ ಆಗುತ್ತಿದೆ. ಬಾಲಿವುಡ್ ನ ಹೆಸರಾಂತ ಸ್ಟುಡಿಯೋ ಒಂದು ಈ ಸಿನಿಮಾ ಮಾಡಲು ಮುಂದೆ ಬಂದಿದೆ.
ಹೆಸರಾಂತ ಸ್ಟಾರ್ ಜೋಡಿಯನ್ನೆ ಈ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಸ್ಟುಡಿಯೋ ಜತೆ ನಾನು ಕಾಂಟ್ರ್ಯಾಕ್ಟ್ ಗೆ ಸಹಿ ಮಾಡಬೇಕಿದೆ. ಅದು ಆದ ತಕ್ಷಣವೇ ಅತೀ ಶೀಘ್ರದಲ್ಲೇ ಸಿನಿಮಾ ಕುರಿತ ವಿಷಯ ಹಂಚಿಕೊಳ್ಳುತ್ತೇನೆ” ಎಂದಿದ್ದಾರೆ ಪ್ರಶಾಂತ್ ರಾಜ್.


ಜೂಮ್, ಆರೇಂಜ್ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪ್ರಶಾಂತ್ ರಾಜ್, ರಾಜ್ಯ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿ ಪಡೆದವರು. ಸ್ಟಾರ್‌ ನಟರ ಜತೆ ಕೆಲಸ ಮಾಡಿದವರು. ಮೊದಲ ಬಾರಿಗೆ ಬಾಲಿವುಡ್ ಗೆ ಹಾರುತ್ತಿದ್ದಾರೆ.
ಕನ್ನಡದ ಅನೇಕ ಕಲಾವಿದರ ಬಾಲಿವುಡ್ ಅಂಗಳದಲ್ಲಿ ಈಗಾಗಲೇ ನಟಿಸುತ್ತಿದ್ದಾರೆ. ಆದರೆ, ನಿರ್ದೇಶಕರ ಸಂಖ್ಯೆ ಕಡಿಮೆ. ಇದೀಗ ಪ್ರಶಾಂತ್ ರಾಜ್ ಬಿಟೌನ್ ಗೆ ಹೋಗುವ ಮೂಲಕ ಈ ಸಂಖ್ಯೆ ಹೆಚ್ಚಿಸಿದ್ದಾರೆ.


“ಬಾಲಿವುಡ್ ನ ಸ್ಟುಡಿಯೋ ಜತೆ ಅಗ್ರಿಮೆಂಟ್ ಬಾಕಿ ಇದೆ. ಅದು ಮುಗಿದ ನಂತರ ಎಲ್ಲ ವಿಷಯವನ್ನೂ ಮಾಧ್ಯಮ ಜತೆ ಹಂಚಿಕೊಳ್ಳುತ್ತೇನೆ. ಮೊದಲ ಬಾರಿಗೆ ಹಿಂದಿ ಸಿನಿಮಾ ಮಾಡುತ್ತಿರುವುದಕ್ಕೆ ಸ್ಚತಃ ನಾನೂ ಕೂಡ ಎಕ್ಸೈಟ್ ಆಗಿದ್ದೇನೆ” ಎಂದಿದ್ದಾರೆ ಪ್ರಶಾಂತ್ ರಾಜ್.

Leave a Reply